ಆಪ್ಘಾನಿಸ್ತಾನದಲ್ಲಿ ಸು. 10-14ನೆಯ ಶತಮಾನಗಳಲ್ಲಿದ್ದ ಒಂದು ಸಾಮ್ರಾಜ್ಯ. (ಇದನ್ನು ಫೋರ್, ಘೌರ್, ಘೊರ್, ಘೂರ್ ಎಂದೂ ಕರೆಯಲಾಗಿದೆ). ಈ ಪ್ರದೇಶ ಇಂದು ಪಶ್ಚಿಮ ಆಪ್ಘಾನಿಸ್ತಾನದ ಹೆರಾತ್ ಮತ್ತು ಕಾಂದಹಾರದ ವಾಯವ್ಯ ಭಾಗದಲ್ಲಿದೆ. ಫಿರ್ದೌಸಿಯ (1010) ಶಾಹನಾಮಾ ಮತ್ತು ಪ್ರಾಚೀನ ಅರಬ್ಬೀ ಭೂವಿವರಣೆಗಳಲ್ಲಿ ಇದರ ಉಲ್ಲೇಖ ಬಂದಿದೆ. ಚಾರಿತ್ರಿಕವಾಗಿ ಘೋರ್ನ ವಿಷಯ ತಿಳಿಯುವುದು ಘಜಿû್ನ ಸಂತತಿಯ ಮೂಲಕವೇ.

ಘೋರ್ ಸಾಮ್ರಾಜ್ಯ ಪರ್ಷಿಯ, ಆಪ್ಘಾನಿಸ್ತಾನ, ಉತ್ತರ ಭಾರತ ಮತ್ತು ಟ್ರ್ಯಾನ್ಸೊಂಕ್ಸಿಯಾನ ಪ್ರದೇಶಗಳನ್ನು ಒಳಗೊಂಡಿತ್ತು. ಘಜಿû್ನ ಮಹಮೂದ್ ಮತ್ತು ಆತನ ಮಗ ಮಸೌದರ ಚರಿತ್ರೆಯ ಜೊತೆಗೆ ಘೋರ್ನ ಮೊದಲ ಉಲ್ಲೇಖ ಬರುತ್ತದೆ. ಮಸೌದ್ 1020ರಲ್ಲಿ ಇದನ್ನು ಗೆದ್ದ. ಮಲ್ಲಿಕ್ ಇಜುದ್ದೀನ್ ಸು. 1100ರಲ್ಲಿ ಘೋರ್ ಸಾಮ್ರಾಜ್ಯದ ಒಡೆಯನಾದ. ಈತನನ್ನು ಮತ್ತು ಈತನ ವಂಶದ ಮುಂದಿನ ಏಳು ಜನರನ್ನು ರಾಜರ ಪಿತೃಗಳೆಂದು ಕರೆಯಲಾಗಿದೆ. ಘಜಿû್ನಯನ್ನು ಮಲ್ಲಿಕ್ ಇಜುದ್ದೀನನ ಮಗ ಅಲಾ-ಉದ್-ದೀನ್ ಜಹಾನ್ ಸೋಜ್ ವಶಪಡಿಸಿಕೊಂಡು ಅದನ್ನು ಸುಟ್ಟುಹಾಕಿದ. ಈತನ ಸೋದರಳಿಯರಾದ ಘಯಾಸುದ್ದೀನ್ ಮಹಮ್ಮದ್ ಮತ್ತು ಮುಯಿಜ್ ಉದ್ದೀನರು ಖುರಾಸಾನ್ ಮತ್ತು ಘಜಿû್ನಯಲ್ಲಿ ಅಧಿಕಾರಿಗಳಾದರು. ಅಲ್ಲಾ-ಉದ್-ದೀನನ ಅನಂತರ ನಡೆಸಲಾದ ದಂಡಯಾತ್ರೆಗಳಲ್ಲಿ ಇವರು ವಿಶೇಷವಾಗಿ ಸಹಾಯ ಮಾಡಿದರು. ಈ ದಂಡಯಾತ್ರೆಗಳಲ್ಲಿ ಮುಲ್ತಾನ್ (1176), ಲಾಹೋರ್ (1186), ಅಜ್ಮೀರ್ (1180) ಇವನ್ನು ಮುಯಿಜ್ ಉದ್ದೀನ್ ವಶಪಡಿಸಿಕೊಂಡ. ಅನಂತರದ 6 ವರ್ಷಗಳಲ್ಲಿ ಭಾರತದ ದಕ್ಷಿಣದಲ್ಲಿ ನಾಗಪುರದವರೆಗೂ, ಪುರ್ವದಲ್ಲಿ ಇರಾವಾಡಿಯವರೆಗೂ ಘೋರ್ ಸಾಮ್ರಾಜ್ಯ ವಿಸ್ತಾರಗೊಂಡಿತು. ಅಂದಿನ ಘೋರ್ ಸಾಮ್ರಾಜ್ಯ ಭಾರತದಿಂದ ಬ್ಯಾಬಿಲೋನಿಯದವರೆಗೂ ಆಕ್ಸಸ್ನಿಂದ ಹಾರ್ಮೂಜ್ ಜಲಸಂಧಿಯವರೆಗೂ ವಿಸ್ತರಿಸಿತ್ತು. ಮುಯಿಜ್ ಉದ್ದೀನನ ಮರಣಾನಂತರ ಭಾರತದ ಸಂಸ್ಥಾನಗಳು ಮತ್ತೆ ಸ್ವತಂತ್ರವಾದುವು. ಅನಂತರ ಘೋರ್ ಸಾಮ್ರಾಜ್ಯದ ವಿಸ್ತಾರ ಘೋರ್ನ ಸುತ್ತಣ ಪ್ರದೇಶ, ಸೀಯಿಸ್ತಾನ್ ಮತ್ತು ಹೆರಾತ್ಗಳಿಗೆ ಸೀಮಿತವಾಯಿತು. ಸುಮಾರು 1215ರಲ್ಲಿ ಈ ಸಾಮ್ರಾಜ್ಯವನ್ನು ಖ್ವಾರಾಜಮ್ನ ರಾಜ ವಶಪಡಿಸಿಕೊಂಡ. ಸು. 30 ವರ್ಷಗಳ ಅನಂತರ ಘೋರ್ ರಾಜಕುಮಾರರು ಇದನ್ನು ಪುನರುತ್ಥಾನಗೊಳಿಸಿ ಹೆರಾತ್ನಲ್ಲಿ ರಾಜ್ಯ ಸ್ಥಾಪಿಸಿದರು. 1383ರಲ್ಲಿ ಹೆರಾತ್ ಮೇಲೆ ಮಂಗೋಲರ ತೈಮೂರ್ ದಾಳಿ ಮಾಡಿ ಅದನ್ನು ನಾಶಪಡಿಸಿದ. ಘೋರ್ ಸಾಮ್ರಾಜ್ಯ ಕಣ್ಮರೆಯಾಯಿತು.	      (ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ